ಅವಳ ಕವಿತೆಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಅವಳ ಕವಿತೆಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಮೇ 24, 2026

ಅವಳು ಹೇಳುತ್ತಲೇ ಇರುತ್ತಾಳೆ (ಅವಳ ಕವಿತೆಗಳು - 25)


 ಅವಳು ಹೇಳುತ್ತಲೇ ಇರುತ್ತಾಳೆ

ತನ್ನ ನಲಿವುಗಳನ್ನು, ನೋವುಗಳನ್ನು

ಅವಳು ಬಿದ್ದರೂ ಎದ್ದದ್ದನ್ನು

ಸುತ್ತಲಿನವರ ಸತ್ಯಗಳನ್ನು

ಅವಳಿಗಾದ ನಂಬಿಕೆ ದ್ರೋಹಗಳನ್ನು

ಅವಳು ಪಟ್ಟ ಪಾಡನ್ನು

ಪ್ರಾಮಾಣಿಕತೆಗೆ ಸಿಕ್ಕ ಬಹುಮಾನವನ್ನು

ಬಯಲಿಗೆಳೆದ ಅಸತ್ಯಗಳನ್ನು

ಹೀಗೆ ಪ್ರತಿಯೊಂದನ್ನೂ..


ಅವಳು ಹೇಳುತ್ತಲೇ ಇರುತ್ತಾಳೆ

ಪ್ರತಿಯೊಂದನ್ನೂ ಕತೆಯಾಗಿಸಿ

ಕೇಳುವವರ ಆಸಕ್ತಿಗೇನಲ್ಲ

ಓದುವವರ ತಾಳ್ಮೆ ಪರೀಕ್ಷಿಸಲಲ್ಲ

ತನ್ನನ್ನು ನಿರೂಪಿಸಿಕೊಳ್ಳುವುದಕ್ಕಲ್ಲ 

ತಾಳ್ಮೆ ಕಳೆದುಕೊಂಡದ್ದಕ್ಕೇನಲ್ಲ

ತನ್ನೊಳಗನ್ನು ಬರಿದಾಗಿಸಲೂ ಅಲ್ಲ

ಅದು ಕೇವಲ ಅವಳ ಕತೆ ಎಂದಲ್ಲ

ಅವಳಂತಹವರ ಕತೆಯಾಗಿರುವುದಕ್ಕೆ


ಅವಳು ಹೇಳುತ್ತಲೇ ಇರುತ್ತಾಳೆ

ತಾನು ಹೇಳಿದ ಮಾತ್ರಕ್ಕೆ

ಏನೋ ಸರಿಯಾಗುತ್ತದೆಂದಲ್ಲ

ಎಲ್ಲರ ಗಮನ ಸೆಳೆಯಲಲ್ಲ

ಕೇವಲ ಒಂದೆರಡು ದಿನವಲ್ಲ

ಯಾವುದೋ ಒಂದೆರಡು ಕತೆಯಲ್ಲ

ಉಸಿರು ನಿಂತು ಬದುಕು ಮುಗಿದರೂ

ಅವಳಿಗೆ ಹೇಳುವುದು ಉಳಿದಿದೆ

ಮತ್ತವಳು ಹೇಳುತ್ತಲೇ ಇರುತ್ತಾಳೆ


~ವಿಭಾ ವಿಶ್ವನಾಥ್

ಭಾನುವಾರ, ಮೇ 10, 2026

ಅವಳೀಗ ಅಮ್ಮ (ಅವಳ ಕವಿತೆಗಳು - 24)


ತುಂಟಾಟದ ದಿನಗಳು ಕಳೆದವು

ಮುಖದಲಿ ಪ್ರೌಢ ಕಳೆ ಬೇಕು

ಜವಾಬ್ದಾರಿ ಹೊತ್ತು ನಡೆ ನೀನೀಗ

ನೀನೀಗ ಅಮ್ಮ - ಎಂದವರವರು


ಮುಗ್ಧೆಯಾದರೆ ಮುಳುಗಿಸುತ್ತಾರೆ 

ಜಾಣತನದಿ ತಿದ್ದಿಕೊಂಡು

ನಿನ್ನ ಆಸೆಗಳ ಗಂಟು ಕಟ್ಟಿಡಬೇಕು

ನೀನೀಗ ಅಮ್ಮ - ಎಚ್ಚರಿಸಿದರವರು


ಮಗುವಿನ ಆಟವ ಆನಂದಿಸುವ

ಸದಾ ನಗುಮುಖದಿ ಎದುರಾಗುವ

ಪ್ರೀತಿಯನ್ನೇ ಮೊಗೆದು ಕೊಡುವ

ಅವಳೀಗ ಅಮ್ಮ - ಅವಳಿಷ್ಟದಂತೆ


ಜಗದ ಸಲಹೆಗೆ ಜಾಣ ಕಿವುಡಾಗಿ

ಎಚ್ಚರಿಕೆಯಿಂದ ಆಪ್ತ ವಲಯದಲಿ

ತನ್ನಾಸೆಯ ಮಗುವಿಗೆ ಆಸರೆಯಾಗುವ

ಅವಳೀಗ ಅಮ್ಮ - ಎಚ್ಚರದಿಂದಿದ್ದಾಳೆ


ಜಗದ ಕಣ್ಣಿಗೆ ಬೇಕಾದ ಅಮ್ಮನಿಗಿಂತ

ಮಗುವಿಗೆ ಬೇಕಾದ ಅಮ್ಮನಾಗಿದ್ದಾಳೆ

ಅವಳಿಗೆ ಸಂಪೂರ್ಣ ಅರಿವಿದೆ ಹೇಗಿರಬೇಕೆಂದು

ಏಕೆಂದರೆ, ಅವಳೀಗ ಅಮ್ಮ


~ವಿಭಾ ವಿಶ್ವನಾಥ್

ಅವಳು ನಟಿಯೇನಲ್ಲ (ಅವಳ ಕವಿತೆಗಳು - 23)


ಅವಳು ನಟಿಯೇನಲ್ಲ

ಆದರೆ..

ಅಳು ನುಂಗಿ ನಗುವ ಕಲೆ

ಮೇಕಪ್ ಇಲ್ಲದೆಯೂ ನಟಿಸುವ

ನೋವನ್ನು ಮರೆಮಾಚುವ ಕಲೆ

ಎಲ್ಲವನ್ನೂ ಸಂಭಾಳಿಸುತ್ತಲೇ

ತನ್ನದೇನೂ ಇಲ್ಲವೆಂಬಂತೆ

ಮತ್ತೊಮ್ಮೆ ಎಲ್ಲವೂ ತನ್ನದೆನ್ನುವ

ಮುಖವಾಡ ಹಾಕದೆಯೇ

ಒಳ್ಳೆಯವಳಾಗಿ ಮಾತ್ರವೇ ಕಾಣುವ

ಎಲ್ಲವನ್ನೂ ನಿಭಾಯಿಸುವ

ಕಲೆ ಕರಗತ ಮಾಡಿಕೊಂಡಿರುವವಳು

ಅಲ್ಲಿ, ಇಲ್ಲಿ ಎಲ್ಲಿಯೂ ದುಡಿಯುತ್ತಾ

ಸಕಲ ಪಾತ್ರಗಳಿಗೂ ಹೊಂದುತ್ತಾಳೆ


~ವಿಭಾ ವಿಶ್ವನಾಥ್

ಭಾನುವಾರ, ಮೇ 3, 2026

ಅವಳು ಪ್ರಕೃತಿ.. ಅವಳು ಹೆಣ್ಣು..! (ಅವಳ ಕವಿತೆಗಳು - 22)


ಅವನ ಸೊಕ್ಕು ಮಿತಿ ಮೀರಿದಾಗ

ಧಿಮಾಕಿಗೆ, ದುರಹಂಕಾರಕ್ಕೆ

ಮೊದಲಿಗೆ ಕನಲುತ್ತಾಳೆ

ನಂತರ ಮೈಕೊಡವಿ ನಿಲ್ಲುತ್ತಾಳೆ

ಮುಂದೆ ಎಚ್ಚರಿಸುತ್ತಾಳೆ 

ತದನಂತರ ಹೂಂಕರಿಸುತ್ತಾಳೆ

ರೌದ್ರ ರೂಪಿಯಾಗುತ್ತಾಳೆ 

ಯಾವುದಕ್ಕೂ ಬಗ್ಗದಿದ್ದಾಗ 

ಕೊನೆಯ ಹಂತ ಸರ್ವನಾಶವೇ..!

ಅವಳು ಪ್ರಕೃತಿ.. 

ಅವಳು ಹೆಣ್ಣು..!


~ವಿಭಾ ವಿಶ್ವನಾಥ್

ಅವಳು ಮತ್ತು ಕಡಲು (ಅವಳ ಕವಿತೆಗಳು - 21)


ದಡದಲ್ಲಿ ನಿಂತು ದೃಷ್ಟಿಸುತ್ತಾ

ಕಡಲನ್ನೇ ಕನ್ನಡಿಯಾಗಿಸಿಕೊಂಡು

ಭಾವಗಳಲ್ಲಿ ಮಿಂದೇಳುತ್ತಾಳೆ ಅವಳು

ಹೆಚ್ಚಿನ ವ್ಯತ್ಯಾಸವಿಲ್ಲ ಇಬ್ಬರಲ್ಲೂ


ಅವಳ ಭಾವಗಳು ಹುಚ್ಚೇರಿದಾಗ 

ಕಡಲಲ್ಲಿ ಭರತದ ಧಾವಂತ

ಅವಳು ಸಮಾಧಾನಿಸಿಕೊಳ್ಳುತ್ತಿದ್ದಂತೆ

ಕಡಲಲ್ಲಿ ಇಳಿತದ ಮಂದಗಮನ


ಅಲೆಗಳ ನಾದಕ್ಕೆ ಮರುಳಾಗುತ್ತಾಳೆ 

ತೆರೆಗಳ ಅಬ್ಬರಕ್ಕೆ ಕಿವಿಯಾಗುತ್ತಾಳೆ 

ಮೇಲೆ ಅಬ್ಬರಿಸಿದರೂ ಒಳಗೆ ಶಾಂತವಿರುವ ಕಡಲು 

ಒಳಗೆ ತುಮುಲವಿದ್ದರೂ ಹೊರಗೆ ಶಾಂತವಿರುವ ಅವಳು


~ವಿಭಾ ವಿಶ್ವನಾಥ್

ಶುಕ್ರವಾರ, ಏಪ್ರಿಲ್ 10, 2026

ಅವಳನ್ನು ಕಂಡದ್ದು ಹೀಗೆ ಮಾತ್ರವೇ (ಅವಳ ಕವಿತೆಗಳು - 20)


 ಅವಳು ಸಿಡಿಯುತ್ತಾಳೆ ಅಂತೆಯೇ ಮಿಡಿಯುತ್ತಾಳೆ

ವಿಪರ್ಯಾಸವೆಂದರೆ, ಸಿಡಿಯುವುದನ್ನು ಕಾಣುವವರು

ಅದರ ಹಿಂದಿನ ಕಾರಣವ ಅರಿಯುವುದಿಲ್ಲ

ಅವಳ ಮಿಡಿತ ಎಂದಿಗೂ ಗುಪ್ತಗಾಮಿನಿಯೇ

ಅವಳನ್ನು ಕಂಡದ್ದು ಹೀಗೆ ಮಾತ್ರವೇ


ಅವಳು ಕಲ್ಲಾಗುತ್ತಾಳೆ ಅಂತೆಯೇ ಕರಗುತ್ತಾಳೆ

ವಿಪರ್ಯಾಸವೆಂದರೆ, ಕಲ್ಲಾಗಿದ್ದನ್ನು ಗಮನಿಸಿದವರಿಗೆ

ಅದರ ಹಿಂದಿನ ಕಷ್ಟಗಳ ಅರಿವೇ ಇಲ್ಲ

ಅವಳ ಕರಗುವಿಕೆ ಎಂದಿಗೂ ಏಕಾಂತದಲ್ಲಷ್ಟೇ

ಅವಳನ್ನು ಕಂಡದ್ದು ಹೀಗೆ ಮಾತ್ರವೇ


ಅವಳು ವಾದಿಸುತ್ತಾಳೆ ಅಂತೆಯೇ ಒಪ್ಪುತ್ತಾಳೆ

ವಿಪರ್ಯಾಸವೆಂದರೆ, ವಾದಿಸುವುದನ್ನು ಜರಿಯುವವರು

ಅವಳ ಯೋಚನಾಲಹರಿಯನ್ನೆಂದೂ ಗಮನಿಸಿಲ್ಲ

ಅವಳ ಒಪ್ಪಿಗೆ ಕೇವಲ ನ್ಯಾಯಬದ್ಧ ತರ್ಕಕ್ಕಷ್ಟೇ

ಅವಳನ್ನು ಕಂಡದ್ದು ಹೀಗೆ ಮಾತ್ರವೇ


ಅವಳು ಪ್ರತ್ಯುತ್ತರಿಸುತ್ತಾಳೆ ಅಂತೆಯೇ ಮೌನಿಯೂ

ವಿಪರ್ಯಾಸವೆಂದರೆ, ಪ್ರತ್ಯುತ್ತರವನ್ನಷ್ಟೇ ಎತ್ತಿ ತೋರುತ್ತಾರೆ

ಅವಳ ಹಿಂದಿನ ತರ್ಕಬದ್ಧ ನುಡಿಗಳನ್ನಲ್ಲ

ಅವಳ ಮೌನ ಈಗ ಕೇವಲ ಅಸಮ್ಮತಿಗೆ ಮಾತ್ರವೇ

ಅವಳನ್ನು ಕಂಡದ್ದು ಹೀಗೆ ಮಾತ್ರವೇ


ಅವಳು ಬದಲಾಗಿದ್ದಾಳೆ ಅಂತೆಯೇ ಬದಲಾಗಿಲ್ಲ

ವಿಪರ್ಯಾಸವೆಂದರೆ, ಬದಲಾವಣೆ ಕಣ್ಣಕಿಸುರಾಗಿದೆ 

ಅವಳ ಗಟ್ಟಿತನವನ್ನು ಅರಗಿಸಿಕೊಳ್ಳಲಾಗುತ್ತಿಲ್ಲ

ಅವಳ ಬದಲಾಗಿಲ್ಲದಿರುವಿಕೆ ಬದಲಾವಣೆಯೆದುರು ನಗಣ್ಯ

ಅವಳನ್ನು ಕಂಡದ್ದು ಹೀಗೆ ಮಾತ್ರವೇ


ಅವಳನ್ನು ಕಂಡದ್ದು ಹೀಗೆ ಮಾತ್ರವೇ

ಕಂಡದ್ದಷ್ಟೇ ಸತ್ಯವಾಗುವುದಿಲ್ಲ.. ಕೇಳಿದ್ದು, ನೋಡಿದ್ದು..!

ಅವಳನ್ನವಳು ನಿರೂಪಿಸಿಕೊಳ್ಳುವ ಜರೂರೇನಿಲ್ಲ

ಪ್ರತಿ ನಾಯಿಗೂ ಕಲ್ಲು ಬೀರಿದರೆ ಗುರಿ ತಲುಪಲಾಗುವುದಿಲ್ಲ

ಮತ್ತೆ ಅವಳು ಹೇಗೂ ಕಾಣಬಹುದು..!


~ವಿಭಾ ವಿಶ್ವನಾಥ್

ಅವಳ ಮೌನ ಕೇವಲ ಮೌನವಲ್ಲ.. (ಅವಳ ಕವಿತೆಗಳು - 19)


ಅವಳ ಪ್ರತಿ ಚರ್ಯೆಗೂ ಕಂಡದ್ದೇ ಅರ್ಥವಾ..

ಅಲ್ಲಲ್ಲ, ಕಂಡುಕೊಂಡದೆಲ್ಲವೂ ಅರ್ಥವೇ..

ಅವಳ ಮಾತಿಗೆ ನೇರವಾದ ಅರ್ಥವೇ ಇದ್ದರೂ

ಅವಳ ಮೌನ ಈಗ ಕೇವಲ ಮೌನವಲ್ಲ..


ಮೌನವೆಂದರೆ ಸುಮ್ಮನಿರುವುದೆಂದವರು ಯಾರು

ಮೌನದಲ್ಲಿ ಅವಳು ಅವಳೊಡನೆ ಮಾತಿಗಿಳಿಯುತ್ತಾಳೆ

ಅವಳೊಡಗಿನ ಕನಿಷ್ಠ ನೂರಾರು ಚರ್ಚೆಯ ಬಳಿಕವೇ

ಅವಳೂ ಮೌನ ಮುರಿದು ಜಗತ್ತಿನೊಡನೆ ಮಾತಿಗಿಳಿಯುವುದು


ಅವಳ ಮೌನ ಕೇವಲ ಸಮ್ಮತಿಯ ಲಕ್ಷಣವಲ್ಲ

ಅಸಮ್ಮತಿಯ ಏಕೈಕ ಅಸ್ತ್ರ ಅವಳ ಮೌನ

ಅಷ್ಟೇ ಏಕೆ..? ಅಸಹ್ಯ, ತಿರಸ್ಕಾರ, ದ್ವೇಷ ಎಲ್ಲದಕ್ಕೂ

ಅವಳ ಬತ್ತಳಿಕೆಯ ಪ್ರಬಲ ಅಸ್ತ್ರವೆಂದರೆ ಮೌನ


ಅವಳು ಮೌನವಾಗುಳಿದಾಗಲೆಲ್ಲಾ ಮೇಲಷ್ಟೇ ತಂಪು

ಮೌನ ಶಿಖರದ ಒಳಗೊಳಗೆ ಲಾವಾದ ಕುದಿತ

ಉಕ್ಕಿ ಬರುವ ಸಿಟ್ಟಿನ ತೀವ್ರತೆ ಮಂಜಾಗಿದೆಯೆಂದರೆ

ಅದಕ್ಕೆ ಕಾರಣ ಕಾಲವಲ್ಲ.. ಕೇವಲ ಮೌನ ಮತ್ತು ಮೌನವಷ್ಟೇ


ಮಾತಿನ ಹರಿತ ಮೊನೆಯಿಂದ ಕೊಲ್ಲಬಯಸಿದ್ದವಳು

ಮೌನದ ಉಕ್ಕಿನ ಹಿಡಿತವನ್ನು ಬಲಿಷ್ಠಗೊಳಿಸಿಕೊಂಡಿದ್ದಾಳೆ

ಮಾತಿನಿಂದ ಒಮ್ಮೆಗೆ ಕೊಲ್ಲುವುದಕ್ಕಿಂತ

ಮೌನದಿಂದ ಇಂಚಿಂಚೂ ತಿವಿದು ಸಾವಿನ ಭಿಕ್ಷೆ ಕೊಡುತ್ತಾಳೆ


ಮೌನದ ಶಕ್ತಿಯಷ್ಟೇ ಅಲ್ಲ ಮಾತನ್ನೂ ರೂಢಿಸಿಕೊಂಡಿದ್ದಾಳೆ

ಮಾತು ಮತ್ತು ಮೌನ ಬೇಕೆಂದಾಗಲಷ್ಟೇ ಹೊರಗೆ

ಮೌನದಿಂದ ಪ್ರಭಾವಿಸುವುದಷ್ಟೇ ಅಲ್ಲ

ಮೌನದಿಂದ ಸಂಪೂರ್ಣ ಪ್ರಭಾವಿತಳೂ ಆಗಿದ್ದಾಳೆ


ಈಗ ಅವಳು ಕೇವಲ ಮೌನಿಯಲ್ಲ ಕಡು ಮೌನಿ

ಮತ್ತೆ ಅದು ಕೇವಲ ಮೌನವೂ ಅಲ್ಲ ಅವಳ ಬಲಿಷ್ಠತೆ

ಈಗ ಮೌನವೂ ಬಲಿಷ್ಠವಾಗಿದೆ ಅವಳ ದೆಸೆಯಿಂದ..

ಅವಳು ಮತ್ತಷ್ಟು ಬಲವಾಗಿದ್ದಾಳೆ ಕೇವಲ ಮೌನದಿಂದ


~ವಿಭಾ ವಿಶ್ವನಾಥ್

ಅವಳ ಧ್ಯಾನ (ಅವಳ ಕವಿತೆಗಳು - 18)


 ಅವಳ ಧ್ಯಾನಕ್ಕೀಗ ಸಮಯದ ಹಂಗಿಲ್ಲ

ಸಿಕ್ಕದೆಲ್ಲವೂ ಸಮಯವೇ.. ನೆಟ್ಟದ್ದೆಲ್ಲವೂ ಏಕಾಗ್ರತೆಯೇ


ಹರಿವ ಜುಳು ಜುಳು ನೀರಿನ ಗತಿಗೆ

ಹಕ್ಕಿ ಕಟ್ಟುತ್ತಿರುವ ಗೂಡಿನ ಸಾಕ್ಷಿಗೆ

ಬೇಲಿಯ ಮೇಲಿನ ಚಿಟ್ಟೆಯ ಹಾರುವಿಕೆಗೆ

ಕಣ್ಣು ಕೀಲಿಸಿ ಕುಳಿತು ಸಾಕ್ಷಿಯಾಗಬಲ್ಲಳು


ಹಕ್ಕಿಯ ಚಿಲಿ ಪಿಲಿ ಕಲರವಕ್ಕೆ

ಅಲ್ಲೆಲ್ಲೋ ಕೇಳುವ ಜೀರುಂಡೆಯ ಕೂಗಿಗೆ

ಕಪ್ಪೆಯ ವಟಗುಟ್ಟುವಿಕೆಗೆ ಈಗ

ಒಂದೇ ತೆರೆನಾದ ಕೇಂದ್ರೀಕರಿಸಿದ ಆಲಿಸುವಿಕೆ


ಬೆಳಗಿನ ತಿಳಿ ಬೆಳಕಿನ ಹಂಗಿಲ್ಲ

ಸಂಜೆಯ ಕೆಂಪಿನ ಸೊಂಪೇ ಆಗಬೇಕಿಲ್ಲ

ಬಿರು ಬಿಸಿಲಲ್ಲೂ ಏಕಾಗ್ರತೆಯಷ್ಟೇ ಹಾದಿ

ಅವಳಿಗೂ ಧ್ಯಾನಕ್ಕೂ ಈಗ ಹೊಸ ನಂಟು


ಧ್ಯಾನಕ್ಕೆ ಕಣ್ಣು ಮುಚ್ಚಿಯೇ ಕೂರಬೇಕಿಲ್ಲ

ಒಳ ಮನಸ್ಸಿನಿಂದ ಪ್ರಶಾಂತತೆಯನ್ನು ಕಾಣುತ್ತಾಳೆ

ಕಿವಿ ತೆರೆದು ಆಲಿಸಿದರೂ ನಿರ್ಲಿಪ್ತೆ

ಮತ್ತೀಗ ಏಕಾಗ್ರತೆಗೆ ಅವಳೇ ಅವಳಿಗೆ ಹಾದಿ


ಓದುತ್ತಾ ಓದುತ್ತಾ ಮುಳುಗಿ ಹೋಗುತ್ತಾಳೆ

ಅದೇನನ್ನೋ ನೋಡುತ್ತಾ ಕಳೆದು ಹೋಗುತ್ತಾಳೆ

ಇನ್ನೇನೋ ಆಲಿಸುತ್ತಾ ಪರವಶಳಾಗುತ್ತಾಳೆ

ಎಲ್ಲದಕ್ಕೂ ಈಗ ಧ್ಯಾನವೆಂದೇ ಹೆಸರಿಸಿದ್ದಾಳೆ


ಅವಳ ಧ್ಯಾನ ರೂಢಿಸಿಕೊಂಡದ್ದಲ್ಲ.. ರೂಢಿಯಾದದ್ದು

ಅವಳು ಧ್ಯಾನಿಯಾದರೂ ಮೌನಿಯಾದರೂ

ಅವಳ ಲೋಕದಲ್ಲಿ ಅವಳು ಸದಾ ಜಾಗೃತೆ

ಮತ್ತೀಗ.. ಧ್ಯಾನಕ್ಕೂ.. ಮೌನಕ್ಕೂ.. ಅವಳಿಗವಳೇ ಸಾಟಿ


~ವಿಭಾ ವಿಶ್ವನಾಥ್

ಅವಳ ನೋವಿಗೂ ಧ್ವನಿಯಿಲ್ಲ (ಅವಳ ಕವಿತೆಗಳು - 17)


 ಎಲ್ಲವನ್ನೂ ಶಕ್ತವಾಗಿ ಮಂಡಿಸುವ ಅವಳು

ನೋವನ್ನು ಮುಂದಿಡುವಾಗ ಸೋಲುತ್ತಾಳೆ

ಅವಳ ನೋವಿಗೆ ಆಳವಿದೆ, ಇತಿಹಾಸವಿದೆ

ಆದರೆ, ನೋವಿಗೊಂದು ಗಟ್ಟಿ ಧ್ವನಿಯಿಲ್ಲ


ನೋವು ಕೊಡುವ ರೀತಿಗಳು ಬದಲಾಗಿವೆ ಅಷ್ಟೇ

ತಲತಲಾಂತರದಿಂದಲೂ ನೋವಿನ ಸ್ವರೂಪ ಒಂದೇ

ಮೂಡಿಸಿದ ಘಾಸಿಯೂ ಅದೇ

ಹಿಂದಿನವರಂತೆಯೇ ಅವಳ ನೋವಿಗೂ ಧ್ವನಿಯಿಲ್ಲ


ಅವಳ ಅಮ್ಮಂದಿರ ನೋವು ಅವಳದ್ದೂ..

ಅವರಂತೆ ನಾನಾಗಲಾರೆ ಎಂದೇ ಹೇಳಿಕೊಂಡರೂ

ಅವರು ಮಾಡಿದ್ದನ್ನೇ ಅವಳೂ ಮಾಡುತ್ತಿದ್ದಾಳೆ

ಅವರಂತೆಯೇ ಸಹಿಸಿಕೊಂಡು ಸಾಗುತ್ತಿದ್ದಾಳೆ


ಉಗುರಿನಿಂದ ಉಂಟಾದ ನೋವಿಗೂ

ಕೊಡಲಿಯಿಂದ ಉಂಟಾದ ನೋವಿಗೂ

ನೋಟದಲ್ಲಷ್ಟೇ ಬದಲಾವಣೆ ತೀವ್ರತೆಯಲ್ಲಲ್ಲ

ಗಾಯ ಮಾಗಿದರೂ ಅವಳ ನೋವು ಅಳಿಯುವುದಿಲ್ಲ


ಎಲ್ಲೆಡೆಯೂ ದಾಖಲಾಗಿರುವುದು ಗಾಯಗಳಷ್ಟೇ

ನೋವು ಎಂದೂ ಎಲ್ಲಿಯೂ ದಾಖಲಾಗಿಯೇ ಇಲ್ಲ

ಹಾಗಾಗಿ ಅವಳು ನೋವನ್ನು ಕಂಡಿರಲಿಲ್ಲ

ಈಗ ಅವಳ ನೋವೂ ದಾಖಲಾಗುವುದಿಲ್ಲ


ಗಾಳಿಯಲ್ಲಿ ಅವಳ ನೋವುಗಳು ತೇಲಿ ಹೋಗುತ್ತವೆ

ಮಾತುಗಳಲ್ಲಿ ಅವಳ ನೋವುಗಳು ಕರಗಿ ಹೋಗುತ್ತವೆ

ವಂಶಪಾರಂಪರ್ಯವಾಗಿ ದಾಟಿಯೂ ಸಾಗುತ್ತವೆ

ಆದರೆ, ನೋವು ಧ್ವನಿಯಿಲ್ಲದೇ ಉಳಿದು ಹೋಗುತ್ತದೆ


ಅವಳ ನೋವು ಅವಳದ್ದು ಮಾತ್ರವಲ್ಲ

ಹಿಂದೆ ಆಗದ್ದು, ಮುಂದೆ ಆಗದಿರುವುದೂ ಅಲ್ಲ

ಆದರೂ, ಅವಳ ನೋವುಗಳ ಆಳ ಅವಳಿಗಷ್ಟೇ ಗೊತ್ತು

ಮತ್ತೆ ಎಂದಿನಂತೆ ಅವಳ ನೋವಿಗೂ ಧ್ವನಿಯಿಲ್ಲ


~ವಿಭಾ ವಿಶ್ವನಾಥ್

ಅವಳ ಭಾವಗಳು ಸತ್ತಿವೆಯಾ.. (ಅವಳ ಕವಿತೆಗಳು - 16)


 ಕಂಡ ಸಾವಿಗೆ ಮನಸ್ಸು ಮಿಡಿಯದ

ಕಂಡ ಕಣ್ಣೀರಿಗೆ ಸಾಂತ್ವನ ಹೇಳಲಾಗದ

ಕಂಡ ನೋವಿಗೆ ಹೃದಯ ಮರುಗದ

ಅವಳ ಭಾವಗಳು ಸತ್ತಿರಬಹುದಾ


ಕಣ್ಣೀರು ನಾಟಕವೆಂದು ತೋರಿದಾಗ

ನೋವಿಗೆ ಮುಖವಾಡವಿದೆಯೆಂದು ಕಂಡಾಗ

ಸಾವಿಗೂ ಬಣ್ಣ ಕಟ್ಟುತ್ತಿದ್ದಾರೆಂದಾದಾಗ

ಅವಳ ಭಾವಗಳು ಬದುಕಿರಬೇಕಿತ್ತಾ


ಸಾಂತ್ವನಿಸಿ ಆಸರೆಯಾಗಬೇಕಾದ್ದು ತನ್ನವರಿಗಾಗಿ

ಮಿಡಿಯಬೇಕಾದ್ದು ತನ್ನವರಿಗಾಗಿ 

ಈ ಅಲಿಖಿತ ನಿಯಮಗಳ ನಡುವೆ ನಾಟಕ ಕಂಡಾಗ

ಅವಳ ಭಾವಗಳು ಉಕ್ಕಬೇಕಿತ್ತಾ


ಪರಿಚಯವೇ ಇಲ್ಲದವರ ನೋವಿಗೆ ನೋಯುತ್ತಾಳೆ

ಕಾಣದವರ ಸಾವಿಗೆ ಕಣ್ಣೀರಾಗುತ್ತಾಳೆ

ಅಪರಿಚಿತರಿಗೂ ಸಾಂತ್ವನಿಸುತ್ತಾಳೆ

ಈಗ ಹೇಳಿ, ಅವಳ ಭಾವಗಳು ಸತ್ತಿವೆಯೇ


ಹೇಳಿ ಕೇಳಿ ಅವಳು ಭಾವನಾಜೀವಿ

ಕೃತ್ರಿಮತೆ ಇಲ್ಲದ ಕಣ್ಣೀರಿಗೆ ಕರಗುತ್ತಾಳೆ

ನಿಜವಾದ ನೋವಿಗೆ ಕಣ್ಣೀರಿಡುತ್ತಾಳೆ

ಒಳ್ಳೆಯವರ ಸಾವಿಗೆ ಶೋಕಾಚರಣೆ ಮಾಡುತ್ತಾಳೆ


ಹಾಗೆಯೇ, ತನ್ನವರು ಎಂದು ಹಣೆಪಟ್ಟಿ ಹೊತ್ತವರ

ಮೊಸಳೆ ಕಣ್ಣೀರಿಗೆ, ಕೃತ್ರಿಮ ನೋವಿಗೆ ಕಲ್ಲಾಗುತ್ತಾಳೆ

ಸಾವನ್ನು ಮುಂದಿಟ್ಟುಕೊಂಡು ಅವಮಾನಿಸಿದಾಗ

ಅವಳ ಭಾವಗಳು ಸತ್ತು ನಿರ್ಲಿಪ್ತತೆ ಹುಟ್ಟಿರುತ್ತದೆ


ಪ್ರತಿಕ್ರಿಯೆಗೆ ಅವಳ ಭಾವಗಳು ಸತ್ತಿದರೂ

ಅಕ್ಷರದಲ್ಲಿ ಮೂಡುವಾಗ ಮತ್ತೆ ಹುಟ್ಟುತ್ತವೆ

ಭಾವಗಳನ್ನು ಕೊಂಡುಕೊಂಡು ಬದುಕಲು ಸಾಧ್ಯವೇ

ನೀವೇ ಹೇಳಿ.. ಅವಳ ಭಾವಗಳು ಸತ್ತಿವೆಯಾ..


~ವಿಭಾ ವಿಶ್ವನಾಥ್

ಅವಳು ಬೆಂಕಿಯುಂಡೆಯೋ.. ಬೆಳಕಿನ ಕುಡಿಯೋ.. (ಅವಳ ಕವಿತೆಗಳು - 15)


ಅವಳೆಂದರೆ ಬೆಳಕಿನ ಕುಡಿಯೋ

ಜ್ವಾಲಾಮುಖಿಯೋ , ಅಗ್ನಿಮುಖಿಯೋ

ಬೆಂಕಿಯುಂಡೆಯೋ ಕಂಡವರಾರು

ಅವಳು ಒಬ್ಬೊಬ್ಬರಿಗೆ ಒಂದೊಂದು ಸ್ವರೂಪ


ಮತ್ತೊಬ್ಬರಿಗೆ ದಾರಿ ತೋರುವ 

ದೊಂದಿಯಾಗಿ ಬೆಳಗಬಲ್ಲಳು

ತನ್ನಂತರಂಗದ ಬೆಳಕನ್ನು ಪ್ರಜ್ವಲಿಸಿಕೊಂಡು

ಶಾಂತವಾಗಿ ಬೆಳಕಾಗಬಲ್ಲಳು


ತನ್ನವರಿಗಾಗಿ ತನ್ನನ್ನು ತಾನೇ ಸುಟ್ಟುಕೊಂಡು

ಉರಿಯುತ್ತಾ ದೀಪ್ತಿಯಾಗಬಲ್ಲಳು

ತನ್ನವರಿಗೆ ತೊಂದರೆಯಾದ ಸಂಧರ್ಭದಲ್ಲಿ

ಜ್ವಾಲೆಯಾಗಿ ಸುಟ್ಟುಬಿಡಬಲ್ಲಳು


ತನ್ನ ಆತ್ಮವಿಶ್ವಾಸಕ್ಕೆ ಧಕ್ಕೆ ತರುವವರಿಗೆ

ಬೆಂಕಿಯುಂಡೆಯಾಗಬಲ್ಲಳು

ತನ್ನ ಸ್ವಾಭಿಮಾನಕ್ಕೆ ಪೆಟ್ಟಾದರೆ

ಕೆಂಡದಂತೆ ಕಮ್ಮಗಿದ್ದವಳು ಹೊತ್ತಿ ಉರಿಯಬಲ್ಲಳು


ಕ್ಷಮಿಸುವವರೆಗೂ ಕ್ಷಮೆ ನೀಡುತ್ತಾ

ತಪ್ಪುಗಳನ್ನು ಹೊಟ್ಟೆಯಲ್ಲಿಟ್ಟುಕೊಂಡು

ಜ್ವಾಲಾಮುಖಿಯಂತೆ ಕೆಲಕಾಲ ಸುಮ್ಮನಿದ್ದು

ಕೊನೆಗೊಮ್ಮೆ ಸಿಡಿದು ಆಹುತಿ ತೆಗೆದುಕೊಳ್ಳಬಲ್ಲಳು


ತನ್ನಂತೆಯೇ ಹಲವು ವ್ಯಕ್ತಿತ್ವಗಳನ್ನು 

ಸೃಷ್ಟಿಸಲು ಜಗಜ್ಯೋತಿಯಾಗಬಲ್ಲಳು

ಸುತ್ತಲೂ ಕತ್ತಲೆಯೇ ಮುತ್ತಿರುವಾಗೆಲ್ಲಾ

ದಾರಿದೀಪವಾಗಿ ತನ್ನಷ್ಟಕ್ಕೆ ತಾನಿರಬಲ್ಲಳು


ಪುಟ್ಟ ಬೆಳಕೆಂದು ಆರಿಸಲು ಹೊರಟರೆ

ಧಗಧಗಿಸಿ ಜ್ವಾಲೆಯಾಗಿ ಸುಟ್ಟು ಬಿಡಬಲ್ಲಳು

ಚಿಕ್ಕ ಹಣತೆ ಎಂದು ಕಡೆಗಣಿಸುವಂತಿಲ್ಲ

ಕತ್ತಲಿರುವಾಗಲೂ ದಿಟ್ಟವಾಗಿ ಇದ್ದಲ್ಲೇ ಪ್ರಕಾಶಿಸಬಲ್ಲಳು


ಕತ್ತಲೆಗೆ ಉರಿಯುತ್ತಲೇ ಪ್ರತ್ಯುತ್ತರ ನೀಡಬಲ್ಲಳು

ಧೈರ್ಯದ ಪ್ರತೀಕವಾಗಿ ಹಿಂಜರಿಯದೇ ನಿಲ್ಲಬಲ್ಲಳು

ನೆಮ್ಮದಿಯ ಜೀವನಕ್ಕೆ ಬಲಿ ಪಡೆಯಲೂಬಲ್ಲಳು

ಸ್ವಸ್ಥ ಬದುಕಿಗೆ ಆಪೋಶನ ತೆಗೆದುಕೊಳ್ಳಬಲ್ಲಳು


ಆಕೆ ದೇವರ ದೀಪವಾಗಿಯೂ ಸೈ

ಹೆಣದ ಮುಂದಿನ ಹಣತೆಯೂ ಹೌದು

ಆಹುತಿ ತೆಗೆದುಕೊಳ್ಳುವ ಜ್ವಾಲೆಯೂ ಸಹಾ

ಎಲ್ಲದಕ್ಕೂ, ಎಲ್ಲಿಯೂ ಸಲ್ಲುವವಳು


ಮಿನುಗುತ್ತಾ, ಬೆಳಕಾಗುತ್ತಾ, ಪ್ರಕಾಶಿಸುತ್ತಾ

ಪ್ರಜ್ವಲಿಸುತ್ತಾ, ದೇದೀಪ್ಯಮಾನವಾಗಿ ಬೆಳಗುತ್ತಾ

ಎಲ್ಲವನ್ನೂ ನುಂಗುತ್ತಾ, ಜ್ವಾಲಾಮುಖಿಯಾಗುತ್ತಾ

ತಡೆಯಲಾರದಂತೆ ಬೆಳಗುತ್ತಾಳೆ, ಉರಿಯುತ್ತಾಳೆ


ಅವಳು ಎಲ್ಲರಿಗೂ ಬೆಂಕಿಯಲ್ಲ.. ಬೆಳಕಾಗಬಲ್ಲಳು

ಹಾಗೆಂದು ಬೆಳಕೇ ಆಗಬೇಕಿಲ್ಲ.. ಜ್ವಾಲೆಯೂ ಹೌದು

ಅವಳು ದಕ್ಕಿಸಿಕೊಂಡವರಿಗೆ ದಕ್ಕಿದಂತೆ

ಅವಳು ಬೆಂಕಿಯುಂಡೆಯೂ.. ಬೆಳಕಿನ ಕುಡಿಯೂ..


~ವಿಭಾ ವಿಶ್ವನಾಥ್

ಅವಳ ಕಾಲಕ್ಕಾಗಿ ಕಾಯುತ್ತಿದ್ದಾಳೆ (ಅವಳ ಕವಿತೆಗಳು - 14)


 ದ್ವೇಷಿಸಿದವರನ್ನು ತನ್ನ ಅಭಿಮಾನಿಸಿಕೊಳ್ಳುವ

ತೆಗಳಿದವರಿಂದಲೇ ತಾನು ಹೊಗಳಿಸಿಕೊಳ್ಳುವ

ತಿರಸ್ಕರಿಸಿದವರಿಂದಲೇ ಪುರಸ್ಕರಿಸಿಕೊಳ್ಳುವ

ಆ ಕಾಲ ಅವಳಿಗೂ ಬರಲಿದೆ

ಅವಳ ಕಾಲಕ್ಕಾಗಿ ಕಾಯುತ್ತಿದ್ದಾಳೆ


ಅವಳಿಗೆ ಮೋಸ ಮಾಡಿದವರೇ ಮಂಡಿಯೂರುವ

ಅವಳಿಂದ ಕಿತ್ತುಕೊಂಡವರೇ ಅವಳ ಬಳಿ ಭಿಕ್ಷೆ ಬೇಡುವ

ಅವಳಿಗೆ ನೋವು ನೀಡಿದವರಿಗೆ ನೋಯಿಸುವ

ಆ ಕಾಲ ಅವಳಿಗೂ ಬರಲಿದೆ

ಅವಳ ಕಾಲಕ್ಕಾಗಿ ಕಾಯುತ್ತಿದ್ದಾಳೆ


ಆದರೆ, ಆ ಕಾಲ ಬಂದಾಗ

ಅವಳಂದುಕೊಂಡಷ್ಟು ಕಠಿಣವಾಗಬಲ್ಲಳೇ

ಬಹುಶಃ, ಅವಳು ಮಾಗಿರುತ್ತಾಳೆ

ಅವರನ್ನು ನಿರ್ಲಕ್ಷ್ಯ ಮಾಡುವ ಕಾಲ ಬರಲಿದೆ

ಅವಳ ಕಾಲಕ್ಕಾಗಿ ಕಾಯುತ್ತಿದ್ದಾಳೆ


ಮತ್ತಷ್ಟು ದಿಟ್ಟವಾಗಿ ಬೆಳೆದಿರುವಾಗ 

ಆಲೋಚನೆಗಳು ಮಗದಷ್ಟು ಪ್ರೌಢವಾಗಿರುವಾಗ

ಅವರಂತೆ ತಾನು ಮಾಡಿಬಿಟ್ಟರೆ

ವ್ಯತ್ಯಾಸವಿಲ್ಲ ಎಂದು ಅರಿಯುವ ಕಾಲ ಬರಲಿದೆ

ಅವಳ ಕಾಲಕ್ಕಾಗಿ ಕಾಯುತ್ತಿದ್ದಾಳೆ


ಅಥವಾ, ನೋವುಗಳಿಂದ ಮನಸ್ಸು ಕಲ್ಲಾಗಿ

ಕಲ್ಲಿನೆದೆಗೆ ಏನೇನೂ ಅಂಟದೆ

ಮತ್ತಷ್ಟು ಕಲ್ಲಾಗಿ ಅವರನ್ನು ಶಿಕ್ಷಿಸಬಹುದು

ಆ ಕಾಲವೂ ಬರಲಿದೆ

ಅವಳ ಕಾಲಕ್ಕಾಗಿ ಕಾಯುತ್ತಿದ್ದಾಳೆ


ಚುಚ್ಚಿದವರನ್ನು ಹಂಗಿಸುತ್ತಲೇ ಸಲಹುವ

ಅವರಿಗಾಗಿ ಉಳಿಸಿಕೊಂಡ ವಿಷವ ಕಕ್ಕುವ

ಕಠೋರವಾಗಿ ತನ್ನಿಂದ ನಿರ್ದಾಕ್ಷಿಣ್ಯವಾಗಿ ದೂರವಿಡುವ

ಆ ಕಾಲವೂ ಬರಲಿದೆ

ಅವಳ ಕಾಲಕ್ಕಾಗಿ ಕಾಯುತ್ತಿದ್ದಾಳೆ


ಕಾಲ ಅವರಿವರಿಗಾಗಿ ಕಾಯುತ್ತಿಲ್ಲ

ಓಡುತ್ತಿರುವ ಕಾಲದೊಂದಿಗೆ ಸಾಗುತ್ತಾ

ಅವಳು ಮಾಗಬಹುದು ಅಥವಾ ಮಾಗದಿರಬಹುದು

ಬದಲಾಗಬಹುದು ಅಥವಾ ಆಗದಿರಲೂಬಹುದು

ಆದರೂ, ಅವಳು ಅವಳ ಕಾಲಕ್ಕಾಗಿ ಕಾಯುತ್ತಿದ್ದಾಳೆ

ಕಾಯುತ್ತಾಳೆ.. ಕಾಯುತ್ತಲೇ ಇರುತ್ತಾಳೆ


~ವಿಭಾ ವಿಶ್ವನಾಥ್

ಅವಳಿಗೂ ಗೊತ್ತು (ಅವಳ ಕವಿತೆಗಳು - 13)

 

ಅವಳಿಗೂ ಗೊತ್ತು

ತಾನೆಷ್ಟು ಬುದ್ಧಿವಂತೆಯೋ

ಹಾಗೆ ಕೆಲ ವಿಚಾರಗಳಲ್ಲಿ ದಡ್ಡಿಯೂ ಎಂದು

ಬುದ್ಧಿವಂತೆ ಎಂದು ಬಿಂಬಿಸಿಕೊಳ್ಳುವುದಿಲ್ಲ

ದಡ್ಡಿ ಎಂದು ಹಳಿದುಕೊಳ್ಳುವುದಿಲ್ಲ

ಸುಮ್ಮನೆ ಜೀವನ ಪಾಠವನ್ನು ಕಲಿಯುತ್ತಾ ಹೋಗುತ್ತಾಳೆ


ಅವಳಿಗೂ ಗೊತ್ತು

ತಾನೆಷ್ಟು ಧೈರ್ಯವಂತೆಯೋ

ಅದಕ್ಕಿಂತಲೂ ಹೆಚ್ಚು ಅಧೈರ್ಯವಂತೆ ಎಂದು 

ಧೈರ್ಯದ ಮುಖವಾಡ ತೊಡುವುದಿಲ್ಲ

ಅಧೈರ್ಯವೆಂದು ಹೊರಗೆ ತೋರಿಸುವುದಿಲ್ಲ

ಸುಮ್ಮನೆ ಎದುರಿಸುತ್ತಾ ಹೋಗುತ್ತಾಳೆ


ಅವಳಿಗೂ ಗೊತ್ತು

ತಾನೆಷ್ಟು ಮೃದು ಹೃದಯಿಯೋ

ಅದಕ್ಕಿಂತಲೂ ಕಲ್ಲು ಮನಸ್ಸಿನವಳೆಂದು

ಮೃದುವಾದಾಗ ಕೆಚ್ಚೆದೆಯಾಗಲೂ ಗೊತ್ತು

ಕಲ್ಲು ಹೃದಯಿಯಾದಾಗ ಕರಗಲೂ ಗೊತ್ತು

ಯಾವಾಗ ಹೇಗಿರಬೇಕೆಂದು ಗೊತ್ತು


ಅವಳಿಗೂ ಗೊತ್ತು

ತಾನೇನೂ ಸುಂದರಿಯಲ್ಲ

ಹಾಗೆಯೇ ಕುರೂಪಿಯೂ ಅಲ್ಲವೆಂದು

ಸುಂದರತೆ ತುಟಿಯಂಚಿನ ಮುಗುಳ್ನಗೆಯಲ್ಲಿ

ಹಾಗೂ ಕುರೂಪ ನೋಡುವವರ ಕಣ್ಣಲ್ಲಿ ಎಂದು

ಸೌಂದರ್ಯದಿಂದ ಅಳೆದುಕೊಳ್ಳಲಾರಳು


ಅವಳಿಗೂ ಗೊತ್ತು

ಅವಳಿಗೇನು ಗೊತ್ತಿದೆ

ಹಾಗೂ ಅವಳಿಗೇನು ಗೊತ್ತಿಲ್ಲವೆಂದು

ತನ್ನ ಅರಿವನ್ನು ಅರಿತಿರುವವಳಿಗೆ

ತನ್ನನ್ನು ತಾನು ಬಿಂಬಿಸಿಕೊಳ್ಳಲೂ ಗೊತ್ತು

ಮರೆಯಾಗಿಸಿಕೊಳ್ಳಲೂ ಗೊತ್ತು


ಅವಳಿಗೂ ಗೊತ್ತು

ಅವಳ ಆಲೋಚನೆಗಳಿಗೂ ಹಾಗೂ

ಇತರರ ಆಲೋಚನೆಗೂ ಇರುವ ವ್ಯತ್ಯಾಸ

ಅವಳಿಗೆ ಬದಲಾಗುವುದೂ ಗೊತ್ತು

ಬದಲಾಯಿಸುವುದೂ ಗೊತ್ತು

ಬದಲಾವಣೆ ಜಗದ ನಿಯಮವೆಂದೂ ಗೊತ್ತು


ಅವಳಿಗೂ ಗೊತ್ತು

ಮತ್ತೊಬ್ಬರು ತಿದ್ದುವ ಮೊದಲೇ

ತನ್ನನ್ನು ತಾನು ತಿದ್ದಿಕೊಳ್ಳುವ ಬಗೆ

ಮತ್ತೊಬ್ಬರು ಬೆರಳು ತೋರದಂತೆ ಬದುಕಲು

ಮತ್ತೊಬ್ಬರಿಂದ ಬದಲಾಗಬೇಕಿಲ್ಲ

ಅವಳ ತಿಳುವಳಿಕೆಯಿಂದಲೇ ಬದಲಾಗುತ್ತಾಳೆ


ಅವಳಿಗೂ ಗೊತ್ತು

ಅವಳು ಅವಳಾಗುವ ಬಗೆ

ಅವಳ ಬಲಾಬಲಗಳು,  ಬುದ್ಧಿವಂತಿಕೆ

ಅವಳ ಮನಸ್ಸನ್ನು ಬಲಗೊಳಿಸುವ ಬಗೆ

ಮತ್ತೊಬ್ಬರಿಂತ ಅವಳನ್ನು ಚೆನ್ನಾಗಿ ಅರಿತದ್ದು

ಅವಳೇ.. ಇದು ಅವಳಿಗೂ ಗೊತ್ತು


~ವಿಭಾ ವಿಶ್ವನಾಥ್

ಅವಳು ಮರಳಿದ್ದಾಳೆ (ಅವಳ ಕವಿತೆಗಳು - 12)


ಅವಳು ಮರಳಿದ್ದಾಳೆ

ಅರ್ಧಕ್ಕೆ ನಿಲ್ಲಿಸಿದ್ದನ್ನು

ಪೂರ್ಣಗೊಳಿಸಲೇ ಬೇಕೆಂದು

ಮತ್ತೆಂದೂ ಅರ್ಧಕ್ಕೆ 

ಕೈ ಬಿಟ್ಟು ಹೋಗಬಾರದೆಂದು


ಅವಳು ಮರಳಿದ್ದಾಳೆ

ಯಾರಿಗೋ ಹೆದರಿ ಸುಮ್ಮನಿದ್ದ

ತನ್ನ ಮೂರ್ಖತನವನ್ನು ಹಳಿದುಕೊಂಡು

ಮತ್ತೆಂದೂ ಯಾರೂ ತನ್ನಂತೆ

ಮೂರ್ಖತನ ಮಾಡದಿರಲೆಂದು


ಅವಳು ಮರಳಿದ್ದಾಳೆ

ಗೆಲುವನ್ನು ಪಡೆಯಲೇಬೇಕೆಂದಲ್ಲ

ಸುಮ್ಮನೆ ಸ್ಪರ್ಧಿಸಲು

ತನ್ನನ್ನು ತಾನು ಪರೀಕ್ಷಿಸಿಕೊಳ್ಳಲು

ತನ್ನನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಲು


ಅವಳು ಮರಳಿದ್ದಾಳೆ

ಘಾಸಿಗೊಳಿದವರನ್ನೆಲ್ಲಾ ಹಣಿಯಲು

ತನ್ನ ಗಟ್ಟಿ ನಡೆಯಿಂದ

ಅನಿರೀಕ್ಷಿತ ಪೆಟ್ಟು ನೀಡುತ್ತಾ

ಅವರನ್ನೇ ಘಾಸಿಗೊಳಿಸಲು


ಅವಳು ಮರಳಿದ್ದಾಳೆ

ತನ್ನ ಮೇಲೆ ಭರವಸೆ ಇಟ್ಟವರಿಗಾಗಿ

ಪ್ರೀತಿಯಿಂದ ಹಾರೈಸುವವರಿಗಾಗಿ

ತನಗಾಗಿಯೇ ಕಾಯುತ್ತಿರುವವರಿಗಾಗಿ

ಕೇವಲ ತನಗಾಗಿ ಮತ್ತು ತನ್ನವರಿಗಾಗಿ


ಅವಳು ಮರಳಿದ್ದಾಳೆ

ಮತ್ತಷ್ಟು ಅನುಭವ ಹೊತ್ತು

ಮಗದಷ್ಟು ಪ್ರೀತಿ ತುಂಬಿಕೊಂಡು

ಮತ್ತೊಂದಿಷ್ಟು ಕನಸು ಹೊತ್ತು

ಹಲವಾರು ಆಸೆಗಳನ್ನೊತ್ತು


ಅವಳು ಮರಳಿದ್ದಾಳೆ

ಇನ್ನಷ್ಟು ಗಟ್ಟಿಗೊಂಡು

ಅಷ್ಟೇ ಧೈರ್ಯದಿಂದ

ಮುಂದಿಟ್ಟ ಹೆಜ್ಜೆ ಹಿಂಪಡೆಯದಂತೆ

ಇಟ್ಟ ಹೆಜ್ಜೆಯನ್ನು ಅಜರಾಮರವಾಗಿಸಲು


~ವಿಭಾ ವಿಶ್ವನಾಥ್ 

ಅವಳ ಹಠ (ಅವಳ ಕವಿತೆಗಳು - 11)

 

ಅವಳು ಹಠಮಾರಿಯೇ..

ಅವಳ ಹಠಕ್ಕೆ ಅವಳಿಗಿಂತಲೂ ಕೆಚ್ಚು

ಅವಳಿಗಿಂತಲೂ ಹಠಮಾರಿತನ

ಅವಳಿಗಿಂತಲೂ ಪ್ರಾಯ

ಏಕೆಂದರೆ, ಅದು ರೂಢಿಗತವಾಗಿದ್ದಲ್ಲ

ರಕ್ತಗತವಾದದ್ದು..!


~ವಿಭಾ ವಿಶ್ವನಾಥ್

ಅವಳೇನು ಕಲ್ಲಲ್ಲ (ಅವಳ ಕವಿತೆಗಳು - 10)


ಅವಳೇನು ಕಲ್ಲಲ್ಲ

ಶಾಪಗ್ರಸ್ತ ಅಹಲ್ಯೆಯೂ ಅಲ್ಲ

ಬಿಡುಗಡೆಗೆ ಯಾರಿಗೋ ಕಾಯುವುದಕ್ಕೆ


ಅವಳೇನು ಕಲ್ಲಲ್ಲ

ಉಳಿಪೆಟ್ಟು ತಿಂದು ಶಿಲೆಯಾಗಲು

ಪೆಟ್ಟು ಕೊಟ್ಟರೆ ಸಿಡಿದು ಚೂರಾಗಬಲ್ಲಳು


ಅವಳೇನು ಕಲ್ಲಲ್ಲ

ಅಂದದ್ದನ್ನು ಎದೆಗಂಟಿಸಿಕೊಳ್ಳದಿರಲು

ಅಂದದ್ದನ್ನು ಸಹಸ್ರವಾಗಿಸಿ ಮಾರ್ದನಿಸಬಲ್ಲಳು


ಅವಳೇನು ಕಲ್ಲಲ್ಲ

ಇದ್ದಂತೆಯೇ ಇದ್ದುಬಿಡಲು

ಬಿರುಗಾಳಿಯಂತೆ ಆವರಿಸಿಕೊಳ್ಳಬಲ್ಲಳು


ಅವಳೇನು ಕಲ್ಲಲ್ಲ

ಯಾರು ಬಂದರೂ ತೆಪ್ಪಗಿರಲು

ಅತಿಕ್ರಮಿಸಿದವರನ್ನು ಹೊಡೆದೋಡಿಸಬಲ್ಲಳು


ಅವಳೇನು ಕಲ್ಲಲ್ಲ

ಯಾರ ನೋವೂ ಅರಿವಾಗದಿರಲು

ತನ್ನ ನೋವು ತಿಳಿಯದಂತೆ ನಟಿಸುತ್ತಾಳಷ್ಟೇ


ಅವಳೇನು ಕಲ್ಲಲ್ಲ

ಬಿದ್ದಲ್ಲಿಯೇ ಬಿದ್ದುಕೊಂಡಿರಲು

ಎದ್ದು ನಿಂತರೆ ಕ್ರಾಂತಿಯನ್ನೇ ಮಾಡಬಲ್ಲಳು


ಅವಳೇನು ಕಲ್ಲಲ್ಲ

ದೂರಿದ್ದನ್ನೆಲ್ಲಾ ಕೇಳಿಕೊಂಡಿರಲು

ದೂರಿದವರನ್ನು ಧೂಳೀಪಟಮಾಡಬಲ್ಲಳು


ಅವಳೇನು ಕಲ್ಲಲ್ಲ

ಮೆಟ್ಟಿಲ್ಲನ್ನಾಗಿಸಿ ತುಳಿಯಲು

ದೇವರ ರೂಪದಲ್ಲಿ ಪೂಜಿಸಿಕೊಳ್ಳುತ್ತಾಳೆ


ಅವಳೇನು ಕಲ್ಲಲ್ಲ

ಸತ್ತ ಹಾಗೆ ಜೀವಿಸುತ್ತಿರಲು

ಸದಾ ಜೀವಂತಿಕೆ ತುಂಬಿರುವ ಹೆಣ್ಣವಳು


ಅವಳೇನು ಕಲ್ಲಲ್ಲ

ಎಂದಿಗೂ ಕಲ್ಲಾಗಲಾರಳು

ಕರಗಬಲ್ಲಳು, ಮರುಗಬಲ್ಲಳು, ಮೃತ್ಯುವೂ ಆಗಬಲ್ಲಳು


~ವಿಭಾ ವಿಶ್ವನಾಥ್

ಅವಳು ಮೌನವಾಗಿದ್ದಾಳೆ ಎಂದ ಮಾತ್ರಕ್ಕೆ... (ಅವಳ ಕವಿತೆಗಳು - 9)


ಅವಳು ಮೌನವಾಗಿದ್ದಾಳೆ ಎಂದ ಮಾತ್ರಕ್ಕೆ

ಅವಳಿಗೆ ಮಾತನಾಡಲು ಬರುವುದಿಲ್ಲವೆಂದಲ್ಲ

ಮಾತನಾಡಿದರೆ ಸಿಡಿ ಗುಂಡುಗಳೇ ತಾಕುತ್ತವೆ

ಮಾತನಾಡುವಷ್ಟು ಅರ್ಹತೆ ಅವರು ಉಳಿಸಿಕೊಂಡಿಲ್ಲ


ಅವಳು ಮೌನವಾಗಿದ್ದಾಳೆ ಎಂದ ಮಾತ್ರಕ್ಕೆ

ಅವಳು ಏನನ್ನೂ ನೋಡುವುದಿಲ್ಲವೆಂದಲ್ಲ

ಎಲ್ಲವನ್ನೂ ಕಣ್ಣಲ್ಲಿ ಕಣ್ಣಿಟ್ಟು ಗಮನಿಸುತ್ತಾಳೆ

ಆದರೆ ಹೇಳಿದರೆ ಅವಳ ಬಾಯಿ ಹೊಲಸು ಅಷ್ಟೇ


ಅವಳು ಮೌನವಾಗಿದ್ದಾಳೆ ಎಂದ ಮಾತ್ರಕ್ಕೆ

ಅವಳ ಕಿವಿಗೆ ಏನೂ ಕೇಳುವುದಿಲ್ಲವೆಂದಲ್ಲ

ಅವಳು ಅತಿ ಸೂಕ್ಷ್ಮಗ್ರಾಹಿಯಾಗಿದ್ದಾಳೆ

ಕೇಳಿಸಿದ್ದೆಲ್ಲವೂ ಅವರ ಕೀಳು ಆಲೋಚನೆಗಳೇ


ಅವಳು ಮೌನವಾಗಿದ್ದಾಳೆ ಎಂದ ಮಾತ್ರಕ್ಕೆ

ಅವಳು ಎಲ್ಲವನ್ನೂ ಸಹಿಸುತ್ತಾಳೆ ಎಂದಲ್ಲ

ಮೌನವೂ ತಾಳ್ಮೆಯೇ ಆಗಬೇಕೇಕೆ..?

ಮೌನವು ಅಸಹನೆಯ ಮತ್ತೊಂದು ರೂಪ ಕೂಡ


ಅವಳು ಮೌನವಾಗಿದ್ದಾಳೆ ಎಂದ ಮಾತ್ರಕ್ಕೆ

ಅವಳು ದಡ್ಡಿ ಎಂದು ತಿಳಿಯಬೇಡಿ

ಎಲ್ಲವನ್ನೂ ಅರ್ಥೈಸಿಕೊಳ್ಳುವ ಬುದ್ಧಿವಂತೆಗೆ

ಎಲ್ಲಿ ಮಾತನಾಡಬೇಕೆಂಬುದು ಗೊತ್ತಿರುತ್ತದೆ ಅಲ್ಲವೇ


ಅವಳು ಮೌನವಾಗಿದ್ದಾಳೆ ಎಂದ ಮಾತ್ರಕ್ಕೆ

ಅವಳ ಎಲ್ಲ ನಿರ್ಧಾರಕ್ಕೂ ತಲೆಬಾಗಿದ್ದಾಳೆ ಎಂದಲ್ಲ

ಎಲ್ಲದಕ್ಕೂ ಅಸಮ್ಮತಿ ಸೂಚಿಸುವ ಮುನ್ಸೂಚನೆಯಾಗಿ

ಒಂದು ಹೆಜ್ಜೆ ಹಿಂದೆಯೇ ಸರಿದಿದ್ದಾಳೆ ಅಷ್ಟೇ..


ಅವಳು ಮೌನವಾಗಿದ್ದಾಳೆ ಎಂದ ಮಾತ್ರಕ್ಕೆ

ಅವಳು ಗೋಣಾಡಿಸಿ ಬಾಗುತ್ತಾಳೆ ಎಂದರ್ಥವಲ್ಲ

ಬಾಗುವವಳಿಗೆ ಬೀಗುವುದೂ ಗೊತ್ತು

ಬಗ್ಗಿಸಿವುದು ಇನ್ನೂ ಚೆನ್ನಾಗಿಯೇ ಗೊತ್ತು


ಅವಳು ಮೌನವಾಗಿದ್ದಾಳೆ ಎಂದ ಮಾತ್ರಕ್ಕೆ

ಸರಿ - ತಪ್ಪುಗಳ ಅರಿವಿಲ್ಲವೆಂದಲ್ಲ

ಅವಳು ಸರಿ - ತಪ್ಪುಗಳ ವಿಮರ್ಶೆಗೆ ನಿಂತು

ಮತ್ತೊಬ್ಬರ ಮರ್ಯಾದೆ ಕಳೆಯಲು ಇಚ್ಛಿಸಿಲ್ಲ


ಅವಳು ಮೌನವಾಗಿದ್ದಾಳೆ ಎಂದ ಮಾತ್ರಕ್ಕೆ

ನಿರ್ಲಕ್ಷ್ಯ, ಅಹಂ ಮತ್ತೊಂದು ಮಗದೊಂದು 

ಏನನ್ನು ಬೇಕಾದರೂ ಅಂದುಕೊಳ್ಳಿ

ಆದರೆ, ಕೊನೆಗೆ ಅವಳು ಮೌನಿ ಎಂದಷ್ಟೇ ತಿಳಿಯಿರಿ


ಅವಳು ಮೌನವಾಗಿದ್ದಾಳೆ ಎಂದ ಮಾತ್ರಕ್ಕೆ

ನೂರು ಅರ್ಥಗಳನ್ನು ಕಲ್ಪಿಸಿಕೊಳ್ಳಬಹುದು

ಸಾವಿರಾರು ಪ್ರಶ್ನಾರ್ಥಕ ರೂಪ ಕೊಡಬಹುದು

ಆದರೆ, ಅವೆಲ್ಲದಕ್ಕೂ ಅವಳ ಮೌನವಷ್ಟೇ ಉತ್ತರ


~ವಿಭಾ ವಿಶ್ವನಾಥ್

ಗುರುವಾರ, ಏಪ್ರಿಲ್ 9, 2026

ಅವಳನ್ನು ತಡೆದು ನಿಲ್ಲಿಸಿದರೆ... (ಅವಳ ಕವಿತೆಗಳು - 8)


 ಅವಳನ್ನು ತಡೆದು ನಿಲ್ಲಿಸಿದರೆ

ಎಂಬ ಆಲೋಚನೆಯಿದ್ದರೂ

ಯಾರಿಗೂ ಧೈರ್ಯವಿರಲಿಲ್ಲ

ಬೆಕ್ಕಿನ ಕತ್ತಿಗೆ ಘಂಟೆ ಕಟ್ಟುವವರಾರು


ಅವಳನ್ನು ತಡೆದು ನಿಲ್ಲಿಸಿದರೆ

ಅನ್ಯಾಯವನ್ನು ಮೆಟ್ಟಿ ನಿಲ್ಲುವವರಾರು

ಅಪವಾದವನ್ನು ಅಳಿಸುವವರಾರು

ದುಷ್ಟತನಕ್ಕೆ ಸವಾಲು ಒಡ್ಡುವವರಾರು


ಅವಳನ್ನು ತಡೆದು ನಿಲ್ಲಿಸಿದರೆ

ಕೆಟ್ಟವರಿಗೆ ಶಿಕ್ಷೆ ನೀಡುವವರಾರು

ಮರೆಯ ಮೋಸಗಳನ್ನು ತಡೆಯುವವರಾರು

ಮುಖವಾಡಗಳನ್ನು ಕಳಚುವವರಾರು


ಅವಳನ್ನು ತಡೆದು ನಿಲ್ಲಿಸಿದರೆ

ಸುಳ್ಳನ್ನು ಬೆತ್ತಲಾಗಿಸುವವರಾರು

ಮನೆಮುರುಕರನ್ನು ಒದ್ದು ಓಡಿಸುವವರಾರು

ಒಳ್ಳೆಯತನಕ್ಕೆ ರಕ್ಷಣೆ ನೀಡುವವರಾರು


ಅವಳನ್ನು ತಡೆದು ನಿಲ್ಲಿಸಿದರೆ

ಅವಳ ಆಕ್ರೋಶ ಸ್ಪೋಟವಾಗಬಹುದು

ಅವಳ ಸಿಟ್ಟಿಗೆ ಸುಟ್ಟು ಹೋಗಬಹುದು

ಅವಳ ಕೋಪ ಕೆರಳಬಹುದು


ಅವಳನ್ನು ತಡೆದು ನಿಲ್ಲಿಸಿದರೆ

ಎಂಬ ಆಲೋಚನೆಯನ್ನೇ ತಡೆದರೆ

ಎಲ್ಲವೂ ಬದಲಾಗಬಹುದು

ಏಕೆಂದರೆ, ಅವಳು ಎಲ್ಲವನ್ನೂ ಬದಲಾಯಿಸಬಲ್ಲಳು


~ವಿಭಾ ವಿಶ್ವನಾಥ್

ಅವಳ ನಂಬಿಕೆ (ಅವಳ ಕವಿತೆಗಳು - 7)


 ಅವಳ ನಂಬಿಕೆ ಶುರುವಾಗಿದ್ದು

ಅಪ್ಪನ ಬೆರಳ ಹಿಡಿತದಿಂದ

ಆ ಬೆರಳು ಹಿಡಿದೇ ಜಗತ್ತಿಗೆ

ಮೊದಲ ಬಾರಿ ಪಾದ ಊರಿದ್ದು..

ಅವನ ಹೆಗಲು ಮೇಲೆ ಹತ್ತಿಯೇ

ಜಗತ್ತನ್ನು ಬೆರಗಿನಿಂದ ನೋಡಿದ್ದು..

ಅವನ ನಂಬಿಕೆಯೇ ಅವಳನ್ನು

ಇಲ್ಲಿಯವರೆಗೂ ಕರೆತಂದದ್ದು..


ಅವಳಿಗೆ ಅರಿವೇ ಆಗಿರಲಿಲ್ಲ

ಅಪ್ಪ ಯಾವ ಮಾಯದಲ್ಲಿಯೋ

ತನ್ನ ಬೆರಳು ಬಿಟ್ಟದ್ದು

ಪಾಣಿಗ್ರಹಣ ಮಾಡಿಸಿದ್ದು..

ಈಗ ಅಪ್ಪನ ಹೆಗಲ ಬದಲಿಗೆ

ತನ್ನ ಕಾಲ ಮೇಲೆಯೇ ನಿಂತದ್ದು

ಯಾವುದೋ ತಿರುವಿನಲ್ಲಿ

ಇಬ್ಬರ ದಾರಿ ಬೇರೆಯಾಗಿದ್ದು..


ಆದರೂ ನಂಬಿಕೆ ಕಡಿಮೆಯಾಗಿಲ್ಲ

ಅಪ್ಪ ಅಲ್ಲೆಲ್ಲೋ ನೋಡುತ್ತಿರಬಹುದು

ಬಿದ್ದರೆ ಸಂತೈಸಬಹುದು

ಕಷ್ಟದಲ್ಲಿ ಕೈ ಹಿಡಿಯಬಹುದು

ಅದೇ ನಂಬಿಕೆಯಲ್ಲಿಯೇ ನಡೆಯುತ್ತಿದ್ದಾಳೆ

ಮತ್ತೆ ದಾರಿಯೆಲ್ಲೋ ಒಂದಾಗಬಹುದು

ಅರೆ..! ಅವಳ ನಂಬಿಕೆ ಹುಸಿಯಾಗಿಲ್ಲ

ಮುಂದೆ ಅಪ್ಪ ಅವಳಿಗಾಗಿಯೇ ಕಾಯುತ್ತಿದ್ದಾರೆ


~ವಿಭಾ ವಿಶ್ವನಾಥ್

ಅವಳಿಗದು ಗೊತ್ತಿರಲಿಲ್ಲ (ಅವಳ ಕವಿತೆಗಳು - 6)


 ಕತೆಯಲ್ಲಿನ ರಾಕ್ಷಸರನ್ನು ಮಾತ್ರ ಕಂಡಿದ್ದಳು

ನಿಜ ಜೀವನದ ರಾಕ್ಷಸರು ಇನ್ನೂ ಭಯಂಕರ

ಸಿಕ್ಕಿಕೊಂಡರೆ ಜೀವನವಿಡೀ ಬಂಧಿಯೇ

ಅವಳಿಗದು ಗೊತ್ತಿರಲಿಲ್ಲ.. ಗೊತ್ತಾಗುತ್ತಿದೆ..!


ಸತ್ತಾಗ ಕುಕ್ಕಿ ಹರಿದು ತಿನ್ನುವ ರಣಹದ್ದುಗಳಿಂತ

ಬದುಕಿದ್ದಾಗಲೇ ಸುಲಿದು ತಿನ್ನುವ ಮನುಷ್ಯರು

ಇದ್ದ ಸುಳಿವನ್ನೇ ಬಿಡದಂತೆ ಮುಗಿಸಬಲ್ಲರು

ಅವಳಿಗದು ಗೊತ್ತಿರಲಿಲ್ಲ.. ಗೊತ್ತಾಗುತ್ತಿದೆ..!


ರಕ್ತ ಹೀರುವ ತಿಗಣೆಗಳನ್ನು ನಿವಾರಿಸಿದಂತಲ್ಲ

ಹಣಕ್ಕಾಗಿ ರಕ್ತ ಹೀರುವ ನಮ್ಮವರೆನಿಸಿಕೊಂಡವರನ್ನು

ಹೊಸಕಿ ಮುಗಿಸಿ ಮರೆತು ಬಿಡುವುದು

ಅವಳಿಗದು ಗೊತ್ತಿರಲಿಲ್ಲ.. ಗೊತ್ತಾಗುತ್ತಿದೆ..!


ತನ್ನ ಮರಿಯನ್ನೇ ಕಬಳಿಸುವ ಪ್ರಾಣಿಗಳಿವೆಯಂತೆ

ತನ್ನ ಮಗುವನ್ನೇ ಕಬಳಿಸುವ ಮನುಷ್ಯರಿರುತ್ತಾರಾ

ಸ್ವಾರ್ಥಕ್ಕಾಗಿ ಏನೆಲ್ಲವನ್ನೂ ಮಾಡುವವರಿರುತ್ತಾರೆ

ಅವಳಿಗದು ಗೊತ್ತಿರಲಿಲ್ಲ.. ಗೊತ್ತಾಗುತ್ತಿದೆ..!


ಚಿಕ್ಕಂದಿನಲ್ಲಿ ಕಂಡಂತೆ ಒಳ್ಳೆಯತನ ಮಾತ್ರವಿರುವುದಿಲ್ಲ

ಬೆಳೆದಂತೆ ಇದ್ದ ಸಕಾರಾತ್ಮಕತೆ ಮಾತ್ರ ಇರುವುದಿಲ್ಲ

ಗೋಮುಖ ವ್ಯಾಘ್ರರು ಹೊಂಚು ಹಾಕುತ್ತಿರುತ್ತಾರೆ

ಅವಳಿಗದು ಗೊತ್ತಿರಲಿಲ್ಲ.. ಗೊತ್ತಾಗುತ್ತಿದೆ..!


ಮುಗ್ಧತೆಯನ್ನೇ ಪೆದ್ದುತನವೆಂದುಕೊಳ್ಳುವವರು

ಒಳ್ಳೆಯತನವನ್ನು ದುರುಪಯೋಗ ಪಡಿಸಿಕೊಳ್ಳುವವರು

ಹಾಗೆ, ಹೀಗೆ, ಹೇಗೂ ಇರುತ್ತಾರೆ ಮನುಷ್ಯರು

ಅವಳಿಗದು ಗೊತ್ತಿರಲಿಲ್ಲ.. ಗೊತ್ತಾಗುತ್ತಿದೆ..!


ಅಪ್ಪ-ಅಮ್ಮ ತೋರಿದ ಒಳ್ಳೆಯ ಜಗತ್ತಿನಲ್ಲಿ

ಒಳ್ಳೆಯವರಿಗೆ ಒಳ್ಳೆಯವರೇ ಸಿಗುತ್ತರಾ

ಹೀಗೆಯೇ ಇರಬೇಕೆಂಬ ನಿಯಮವೆಲ್ಲಿದೆ 

ಅವಳಿಗದು ಗೊತ್ತಿರಲಿಲ್ಲ ಗೊತ್ತಾಗುತ್ತಿದೆ


ಅವಳಿಗದು ಗೊತ್ತಿರಲಿಲ್ಲ ಎಂದ ಮಾತ್ರಕ್ಕೆ

ಇಂತಹವು ಹಿಂದೆ ಇರಲೇ ಇಲ್ಲವೆಂದಲ್ಲ

ಇಲ್ಲವೇ, ಈಗೀಗ ಸೃಷ್ಟಿಯಾದದ್ದೂ ಅಲ್ಲ

ಆದರೆ, ಅವಳಿಗದು ಗೊತ್ತಿರಲಿಲ್ಲ ಅಷ್ಟೇ


~ವಿಭಾ ವಿಶ್ವನಾಥ್